ರಾಜ್ಯಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆ


ಎ. ಎಸ್. ಸಿ  ಪದವಿ ಕಾಲೇಜಿನ ಕನ್ನಡ ವಿಚಾರ ವೇದಿಕೆ ಹಮ್ಮಿಕೊಂಡಿದ್ದ  ರಾಜ್ಯಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿದ್ದರು. ಎಳೆಯ ಮನಸ್ಸಿನ ಭಾವನೆಗಳು ಅಕ್ಷರ ರೂಪ ಪಡೆಯಲು ಚಡಪಡಿಸುತ್ತಿರುವುದು ಗೋಚರವಾಯಿತು.ಕೊರೋನ, ಅಪ್ಪ ಅಮ್ಮ, ಗೆಳೆತನ, ದೇಶಭಕ್ತಿ, ಭ್ರಷ್ಟಾಚಾರ, ರಾಜಕೀಯ, ಸಾಮಾಜಿಕ ದುರಂತಗಳ ಸುತ್ತಲೂ ಹೆಣೆದ ಕವನಗಳು ಇನ್ನೂ ಆಳದ ಅನುಭವಗಳನ್ನು ನಿರೀಕ್ಷಿಸುತ್ತಿವೆ. ಅವುಗಳಲ್ಲಿ ಕೆಲವನ್ನು ನಮ್ಮ ತೀರ್ಪುಗಾರರು ಆಯ್ದು ಮೆಚ್ಚುಗೆಯನ್ನು ಸೂಚಿಸಿದ ಕವನಗಳು ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. ನಿಮ್ಮ ಸಾಹಿತ್ಯಾಭಿರುಚಿ  ಹೀಗೆ ಮುಂದುವರೆಯಲಿ ಮತ್ತು ಹೆಚ್ಚಿನ ಓದಿಗೆ ತೊಡಗಿಸಿಕೊಂಡು ಪಕ್ವವಾಗಿ ಹೊರಹೊಮ್ಮಲಿ ಎನ್ನುವುದೇ ನಮ್ಮ ಹಾರೈಕೆ.

1. ಹುಟ್ಟದಿರು ಸೂರ್ಯ

ಹಾಲುಗಲ್ಲದ ಹಸುಳೆ
ಹಸಿಮೈ ಬಾಣಂತಿ
ವೃದ್ದೆಯೆಂಬುದನೂ ಲೆಕ್ಕಿಸದೆ
ಹೆಬ್ಬಾವಿನಂತೆರಗಿ
ತೀಟೆ ತೀರಿಸಿಕೊಳ್ಳುವ
ಕಾಮಾಂಧರ
ಹುಟ್ಟಡಗುವವರೆಗೆ
ಹುಟ್ಟದಿರು ಸೂರ್ಯ

ಭಗವದ್ಗೀತೆಯ ಮೇಲಾಣೆ ಮಾಡಿ
ಬ್ರಹ್ಮಾಂಡ ಭ್ರಷ್ಟಾಚಾರವೆಸಗಿ
ಹರಿಶ್ಚದ್ರರ ಹೆಸರಿಗೆ
ಮಸಿ ಬಳಿಯುವ ಮತಿಹೀನರು
ಮಸಣ ಸೇರುವವರೆಗೆ
ಹುಟ್ಟದಿರು ಸೂರ್ಯ        

ಗಾಂಧೀ ಭಾವಚಿತ್ರದಡಿ ಕುಳಿತು
ಕಂತೆ ಕಂತೆ ಲಂಚ ಪಡೆವ
‘ಲೋಕ’ ಕಂಜರ
ನಿರ್ಲಜ್ಜರ
ನಿರ್ವಂಶವಾಗುವವರೆಗೆ
ಹುಟ್ಟದಿರು ಸೂರ್ಯ        

ಕಿಲುಬು ಪಾತ್ರೆಯಲಿ
ಹುಳಿಯ ಕಲಿಸಿ ಉಣ್ಣುತ
ಆತಂಕ ಸೃಷ್ಟಿಸುವ
ದೇಶದ್ರೋಹಿ ಬೀಜಾಸುರರ
ಹೆಡಮುರಿ ಕಟ್ಟುವ ತನಕ
ಹುಟ್ಟದಿರು ಸೂರ್ಯ        

ಬರಗಾಲ ಭೂಕಂಪ
ಜಲಪ್ರಳಯ
ಚಂಡಮಾರುತ ಸಂತ್ರಸ್ತರ
ಹೆಣದ ಮೇಲಿನ
ಬಟ್ಟೆ ಬಿಡದ ಭಂಡರು
ಇಲ್ಲವಾಗುವವರೆಗೂ
ಹುಟ್ಟದಿರು ಸೂರ್ಯ  

-ಕೀರ್ತಿಜ
(ಸಂಗಮೇಶ ಕತ್ತಿ)

ಬಿ.ಎ ದ್ವಿತೀಯ ವರ್ಷ
ಎಸ್.ಕೆ ಮಹಾವಿದ್ಯಾಲಯ ತಾಳಿಕೋಟಿ

2.ಕಾಗದ್ ಕಿ ಟುಕುಡಾ

ನಮ್ಮತನವನ್ನ ಬದಲಾಯಿಸಿ
ಸಾಧಿಸಬೇಕೆ ಏನನ್ನ?
ಕೇವಲ ದುಡಿಯಬಹುದು
ಯಂತ್ರದಂತೆ
ಹರಿದ ನೋಟನ್ನ…

ಹರಿದ ಸೀರೆಯಲ್ಲಾದರೂ
ನೆಲ ಒರೆಸುವೆ,
ಹರಿದ ನೋಟಿನಲ್ಲೇನು ಮಾಡಲಿ !?

ಒಲೆಗೆ ಹಾಕೋಣವೆಂದರೆ
ಕ್ಷಣ ಕೂಡ ಉರಿಯದು..

ಪೊಟ್ಟಣ ಕಟ್ಟೋಣವೆಂದರೆ
ಸಿಹಿ ಸಕ್ಕರೆ ಕೂಡ ಸೋರುವುದು !

ಕಡೆಯ ಪಕ್ಷ ಉಪಯೋಗಿಸೋಣವೆಂದರೆ
ಅದೀಗ ನೋಟಲ್ಲವಂತೆ
ಕೇವಲ ಕಾಗದ್ ಕಿ ಟುಕುಡಾ

-ಶಮಂತ್ ಶೌರಿ ಎನ್.ಆರ್
ದ್ವೀತಿಯ ಪಿಯುಸಿ
ಗೋಪಾಲಸ್ವಾಮಿ ಪಿಯು ಕಾಲೇಜು ಮೈಸೂರು

3. ಕೋಗಿಲೆ ಹಾಡುತಿದೆ

ನೀಲಿ ಬಾನಿನ ಊರಿಗೇ ಸೂರ್ಯೋದಯ..
ಬೆಳ್ಳಿ ತಾರೆಯ ಊರಿಗೆ ಚಂದ್ರೋದಯ..
ಹೊಸ ಬಯಕೆಯು ತುಂಬಿ ಮನಸಿನಲಿ..
ಉಲ್ಲಾಸವೆ ತುಂಬಿದೆ ಹಾಡಿನಲಿ..
ನವಭಾವನೆಯೆಲ್ಲಾ ಕುಣಿದಾಡಿ..
ಹೊಸ ಹಾಡನು ಒಂದು ನಾ ಹಾಡಿ..!
ಸುಂದರ ಜಗದಲಿ
ಈ ಹೊಸ ರಾಗಕೆ
ಕೋಗಿಲೆ  ಕೂಗುತಿದೆ..!
ನೀಲಿ ಬಾನಿನ ಊರಿಗೇ ಸೂರ್ಯೋದಯ..
ಬೆಳ್ಳಿ ತಾರೆಯ ಊರಿಗೆ ಚಂದ್ರೋದಯ..

ಬಯಕೇ ಎದೆಯ ಗೂಡಿನಲೀ..
ಹಾಡನು ಹಾಡಲೂ
ಹರಿಯೋ ನದಿಯ ನೀರಿನಲಿ
ನಾದವ ಕೇಳಲೂ
ಹಾಡುತಿದೆ ಹಾಡನು ಒಂದು
ಮನಸಲಿ ಕೋಗಿಲೆಯೂ..!
ಶಿಲೆಗಳು ಸಂಗೀತವ ಕೇಳಿ
ನಾಟ್ಯವ ಮಾಡಿರಲೂ..!
ಬೆಳ್ಳಿ ತಾರೆಯ ಊರಿನಲೀ
ತಾರೆಯು ನಾನಾಗೀ
ನನ್ನೀ ಉಸಿರಲೀ ಸಪ್ತ ಸ್ವರಗಳೂ
ಬರೆಯುತ ಸಾಗಿವೆ
ನೀಲಿ ಬಾನಿನ ಊರಿಗೇ ಸೂರ್ಯೋದಯ..
ಬೆಳ್ಳಿ ತಾರೆಯ ಊರಿಗೆ ಚಂದ್ರೋದಯ..

ಈ ಬದುಕೇ ಸಂಗೀತವೂ
ಸಂಗೀತವೆ ಜೀವನ
ಸಂಗೀತವೇ ನೀ ಜೊತೆಗಿರಲು
ಜೀವನ ಪಾವನಾ!
ಅಣುವು ಅಣುವು ನೀನಾಗಿರುವೆ
ಮಿಡುಯುವ ಹೃದಯದಲೀ !
ತನು ಮನದಲಿ ನೀ ತುಂಬಿರುವೇ
ನನ್ನ ಬಾಳಿನಲೀ
ಬಯಸಿದಂಥಾ ಆಸೆಯು
ಈಗ ನನಸಾಗಿ
ಮನಸನು ತುಂಬಿ ಹಾಡನು ಹಾಡಲು
ಬಂದಿದೆ ಶುಭಗಳಿಗೆ!

ನೀಲಿ ಬಾನಿನ ಊರಿಗೆ ಸೂರ್ಯೋದಯ
ಬೆಳ್ಳಿ ತಾರೆಯ ಊರಿಗೇ ಚಂದ್ರೋದಯ..
ಹೊಸ ಬಯಕೆಯು ತುಂಬಿ ಮನಸಲಿ
ಉಲ್ಲಾಸವೆ ತುಂಬಿದೆ ಹಾಡಿನಲಿ
ನವಭಾನೆಯಲ್ಲಾ ಕುಣಿದಾಡಿ!
ಹೊಸ ಹಾಡನು ಒಂದು ನಾ ಹಾಡಿ..!
ಸುಂದರ ಜಗದಲಿ
ಹೊಸ ರಾಗಕೆ
ಕೋಗಿಲೆ ಕೂಗುತಿದೆ..!

  -ಪ್ರಜ್ವಲ್ ಭಾನು ಆರ್.ಬಿ
 ಮೊದಲ ವರ್ಷ ಬಿ.ಎಸ್ಸಿ,

4. ಅವನಿಯ ಕೂಗು

ಮಾನವನೆಂಬ ಆಕೃತಿಗೆ ಜೀವಧಾರೆ ಹೆಣ್ಣು….
ಆತನ ಜೀವನ ಅವಳಿಟ್ಟ ಭಿಕ್ಷೆ..!!
ಧರೆಯ ಮಡಿಲಲಿ ಮಗುವಾಗಬೇಕು….
ಒಡಲ ಕಾಡುವ ಬರವಾಗಬಾರದು..!
ಅಥಾವ ತಾಯಿಯ ಕುಡಿಯೋ….
ಅದೆಷ್ಟು ಬಯಕೆಗಳ ಬಂಡಿ ಹೊತ್ತು ಸಾಗುತ್ತಿದ್ದಳೋ….!!
ಕರಿ ನೆರಳ ಅಲೆಯೊಂದು ಬಂದು
ತಳರೆಲೆಯ ಹೂಬಳ್ಳಿಯನು ಕೊಂಡೊಯ್ದಂತೆ
ಕದ್ದೊಯ್ದರು ಆ ಕುಡಿಯ ಕನಸ…
ಆಗಾಧ ನಸುಕಿನಲ್ಲಿ ಬರುವ ಗುಮ್ಮನಂತೆ
ಇನ್ನೆಷ್ಡು ಸಹಿಸಬೇಕು…
ಇಂದು ಅವಳ ಅಸ್ತಿತ್ವವೇ ಅಡಗಿದೆ…
ಪ್ರೀತಿ, ಶಾಂತಿ, ಭಾವ, ಮತೆ ಎಲ್ಲವೂ ಹೆಣ್ಣು…,
ಇಳೆಯ ಖಣ-ಖಣವು ಸ್ತ್ರೀಯ ಅಂಶ..,!!
ನಿಲ್ಲುವುದೆಂದು ಈ ಶೋಷಣೆ…,
ಮಗದೆಷ್ಟು ಆತ್ಮದ ಆಹುತಿಯಾಗಬೇಕಿದೆ..!!
ನರಭಕ್ಷಕರ ನರಹೀನತೆಯ ಕಾಲಕೆ…
ಮತ್ತೇಷ್ಟು ಸಮಯ ಕಾಯಬೇಕು ಈ ಅವನಿ ಜನ್ಮ..!!
ಮಹಾಯುಗದ ಅನಿವಾರ್ಯತೆ ಎದುರಾಗಿದೆ ಇಂದು….
ಸ್ತ್ರೀ ಶಕ್ತಿಯ ಮಗದೊಂದು ಅವತಾರಕೆ..!!

-ಭೂಮಿಕಾ.ಎಚ್.ಕೆ
ಮೊದಲ ವರ್ಷ ಬಿ.ಎಸ್ಸಿ,
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡ